ಕೃಷಿ ಉತ್ಪನ್ನ ಮಾರಾಟ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 	ಕೃಷಿ ಉತ್ಪನ್ನದ ಮಾರಾಟ, ಉತ್ಪಾದನೆಯ ಒಂದು ಬೇರ್ಪಡಿಸಲಾರದ ಅಂಗವಾಗಿದೆ. ಉತ್ಪನ್ನದ ಮಾರಾಟ ಅದರ ಉತ್ಪಾದನೆಯಷ್ಟೇ ಮುಖ್ಯವಾದ್ದು. ಉತ್ಪಾದನೆ ಮೊದಲನೆಯ ಹಂತವಾದರೆ, ಮಾರಾಟ ಕೊನೆಯ ಹಂತ. ಇವೆರಡನ್ನೂ ಬೇರ್ಪಡಿಸಲಿಕ್ಕಾಗದು. ಕೃಷಿ ಉತ್ಪಾದನೆಯ ಉದ್ದೇಶವೆಂದರೆ, ಉತ್ಪನ್ನವನ್ನು ಬೇಕಾದ ಪರಿಮಾಣದಲ್ಲಿ ಬೇಕಾದ ಕಡೆಯಲ್ಲಿ ಬೇಕಾದ ರೂಪದಲ್ಲಿ ಗ್ರಾಹಕರಿಗೆ ಪೂರೈಸುವುದು. ಕೃಷಿ ಮಾರಾಟ ಈ ಉದ್ದೇಶವನ್ನು ಈಡೇರಿಸುತ್ತದೆ.

	ಕೃಷಿ ಉತ್ಪನ್ನದ ಮಾರಾಟ ಕಾರ್ಯದಲ್ಲಿ ನಾನಾ ವಿಧವಾದ ಕಾರ್ಯಗಳು ಅಡಕವಾಗಿವೆ. ಇವು ಹೊಲದಲ್ಲಿ ಇಳುವರಿಯನ್ನು ಪಡೆದಾಗಿನಿಂದ ಅದು ಗ್ರಾಹಕರಿಗೆ ಮುಟ್ಟುವವರೆಗೂ ಹಬ್ಬಿವೆ. ಈ ಕಾರ್ಯಗಳು ಅತ್ಯಂತ ಅವಶ್ಯಕವಾದವು. ಕೃಷಿ ಉತ್ಪನ್ನಗಳು ಜೀವನಾವಶ್ಯಕವಾದ ಅಥವಾ ಕೈಗಾರಿಕೆಗೆ ಅವಶ್ಯಕವಾದ ಪದಾರ್ಥಗಳಾದ ಕಾರಣ ಸತತವಾಗಿ ಇವುಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಇವುಗಳ ಉತ್ಪಾದನೆ ಮಾತ್ರ ಸಾಮಾನ್ಯವಾಗಿ ವರ್ಷಕ್ಕೆ ಒಂದು ಅಥವಾ ಎರಡು ಸಾರಿ ಋತುಗಳಿಗನುಸಾರವಾಗಿ ಆಗುತ್ತದೆ. ಎರಡನೆಯದಾಗಿ, ಇವುಗಳಿಗೆ ಬೇಡಿಕೆ ಎಲ್ಲಿರುತ್ತದೋ ಅಲ್ಲೇ ಇವನ್ನು ಯಾವಾಗಲೂ ಬೆಳೆಯಲಾಗುವುದಿಲ್ಲ. ಮೂರನೆಯದಾಗಿ, ಇವು ಗ್ರಾಹಕರಿಗೆ ಬೇಕಾದ ರೂಪದಲ್ಲಿ ಬೆಳೆಯುವುದಿಲ್ಲ. ಆದ್ದರಿಂದ ಇವನ್ನು ಅವರಿಗೆ ಬೇಕಾದ ಕಾಲ, ರೂಪ, ಸ್ಥಳ ಮತ್ತು ಪರಿಮಾಣಗಳಲ್ಲಿ ದೊರಕಿಸಲು ನಾನಾ ವಿಧವಾದ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಕಾರ್ಯಗಳು ವೈಶಿಷ್ಟ್ಯಪೂರ್ಣವಾಗಿರುವುದರಿಂದ ಇವಕ್ಕೆ ನುರಿತ, ಅನುಭವಸ್ಥ, ಮಧ್ಯವರ್ತಿಗಳ ಪಾತ್ರ ಅವಶ್ಯವೆನಿಸಬಹುದು. ಆದಕಾರಣ ಮಾರಾಟ ಕಾರ್ಯಗಳು ಕೃಷಿ ಉತ್ಪನ್ನದ ಮಾರಾಟದಲ್ಲಿ ಅತ್ಯಂತ ಮಹತ್ತ್ವದ ಮತ್ತು ವೈಶಿಷ್ಟ್ಯಪೂರ್ಣವಾದ ಕಾರ್ಯಗಳು. ಕೃಷಿ ಉತ್ಪನ್ನದ ಮಾರಾಟದ ಮುಖ್ಯ ಕಾರ್ಯಭಾರಗಳನ್ನು ಮುಂದೆ ವಿವರಿಸಲಾಗಿದೆ. 

	1. ಸಂಗ್ರಹಣ : ಕೃಷಿ ಉತ್ಪನ್ನಗಳು ಸಾಮಾನ್ಯವಾಗಿ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಕೋಟ್ಯಂತರ ಬೇಸಾಯಗಾರರಿಂದ ಅಲ್ಪಪರಿಮಾಣಗಳಲ್ಲಿ ಉತ್ಪಾದಿತವಾಗುತ್ತವೆ. ಆದರೆ ಇವಕ್ಕೆ ಬಹುಪಾಲು ಬೇಡಿಕೆ ಕೇವಲ ಕೆಲವಾರು ಪಟ್ಟಣಗಳಲ್ಲೂ ರೂಪಾಂತರಿಸುವ ಕೈಗಾರಿಕಾ ಕ್ಷೇತ್ರಗಳಲ್ಲೂ ಕೇಂದ್ರೀಕೃತವಾಗಿರುತ್ತದೆ. ನಾನಾ ಕಡೆಗಳಲ್ಲಿ ಹರಡಿಕೊಂಡಿರುವ ಸಣ್ಣ ಸಣ್ಣ ಉತ್ಪಾದಕರಿಂದ ಕೃಷಿ ಉತ್ಪನ್ನವನ್ನು ಪಡೆದು ಕೆಲವು ಮುಖ್ಯ ಕೇಂದ್ರಗಳಲ್ಲಿ ಒಂದುಗೂಡಿಸುವುದು ಬಹು ಮುಖ್ಯವಾದ ಅಂಶ.

 	2. ವಸ್ತುಗಳ ಸಾಗಣೆ : ವಸ್ತುಗಳನ್ನು ಉತ್ಪಾದಿತ ಸ್ಥಳಗಳಿಂದ ಸಂಗ್ರಹ ಸ್ಥಳಗಳಿಗೆ ಮತ್ತು ಅಲ್ಲಿಂದ ಅವನ್ನು ಸಗಟು ವ್ಯಾಪಾರ ಕೇಂದ್ರಗಳಿಗೆ, ಚಿಲ್ಲರೆ ವ್ಯಾಪಾರ ಕೇಂದ್ರಗಳಿಗೆ ಅಥವಾ ಪೇಟೆಗಳಿಗೆ ಸಾಗಿಸಬೇಕಾಗುತ್ತದೆ. ಮಾರುಕಟ್ಟೆ ವಿಸ್ತಾರವಾದಂತೆ ಈ ಕಾರ್ಯದ ಮಹತ್ತ್ವವೂ ವ್ಯಾಪ್ತಿಯೂ ಹೆಚ್ಚುತ್ತದೆ.

	3. ದಾಸ್ತಾನು : ವಸ್ತುಗಳ ಉತ್ಪಾದನೆಯ ಅನಂತರ ಅವು ಗ್ರಾಹಕರಿಗೆ ತಲುಪುವವರೆಗಿನ ಅವಧಿಯಲ್ಲಿ ಅವು ಕೆಡದಂತೆ ದಾಸ್ತಾನು ಮಾಡುವುದು ಮುಖ್ಯವಾದ ಕಾರ್ಯ. ಇದರಿಂದ ಅವನ್ನು ಬೇಕಾದಾಗ ಮಾರುವುದು ಅಥವಾ ಉಪಯೋಗಿಸುವುದು ಶಕ್ಯವಾಗುತ್ತದೆ. ಇದರಿಂದ ವಸ್ತುಗಳ ಸರಬರಾಜನ್ನು ಬೇಡಿಕೆಗೆ ಅನುಗುಣವಾಗಿ ನಿಯಂತ್ರಿಸುವುದು ಸಾಧ್ಯ. ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಸರಬರಾಯಿ ಹೆಚ್ಚಾಗಿ ಬೆಲೆ ಇಳಿಯುವ ಪ್ರವೃತ್ತಿ ಇದ್ದಾಗ ಸರಬರಾಜನ್ನು ತಡೆಹಿಡಿದು, ಬೆಲೆ ಇಳಿಯುವ ಪ್ರವೃತ್ತಿಯನ್ನು ತಡೆಯುವುದು ಮತ್ತು ಅನುಕೂಲ ಪರಿಸ್ಥಿತಿಯಲ್ಲಿ ಯೋಗ್ಯ ಬೆಲೆಗೆ ವಸ್ತುಗಳನ್ನು ವಿಕ್ರಯಿಸುವುದು ಶಕ್ಯವಾಗುತ್ತದೆ.

	4. ಹಣಕಾಸಿನ ಪೂರೈಕೆ : ವಸ್ತುಗಳ ಉತ್ಪಾದನೆಯ ಅನಂತರ ಅವು ಗ್ರಾಹಕರಿಗೆ ತಲುಪುವ ತನಕ ಹಣಕಾಸಿನ ವ್ಯವಸ್ಥೆ ಮಾಡುವುದೂ ಮಾರಾಟದ ಒಂದು ಮುಖ್ಯ ಅಂಗ, ಕೃಷಿ ವಸ್ತುವಿನ ಉತ್ಪಾದಕನಿಗೆ ತೆರುವುದಕ್ಕೂ ವಸ್ತುಗಳ ಸಾಗಣೆ, ದಾಸ್ತಾನು ಸಂಸ್ಕರಣ ಮುಂತಾದ ಮಾರಾಟ ಕಾರ್ಯಗಳಿಗೂ ಹಣ ಬೇಕಾಗುತ್ತದೆ. ಸಾಮಾನ್ಯವಾಗಿ ಸುಗ್ಗಿಯಾದ ಕೂಡಲೆ ಕೃಷಿಕರು ತಮ್ಮ ಉತ್ಪಾದನೆಯ ಕಾರ್ಯಕ್ಕೆ ಪಡೆದ ಸಾಲವನ್ನು ಮುಟ್ಟಿಸಲು ಮತ್ತು ತಮ್ಮ ಮನೆ ಖರ್ಚಿಗೆ ಹಣ ಪಡೆಯಲು ಶೀಘ್ರವಾಗಿ ತಮ್ಮ ಉತ್ಪನ್ನವನ್ನು ಮಾರುತ್ತಾರೆ. ಹೀಗೆ ಏಕಕಾಲದಲ್ಲಿ ಉತ್ಪನ್ನ ಹೆಚ್ಚು ಮೊತ್ತದಲ್ಲಿ ಮಾರುಕಟ್ಟೆಗೆ ಬರುವುದರಿಂದ ಅದರ ಬೆಲೆಗಳು ಇಳಿದು ರೈತರಿಗೆ ತಕ್ಕ ಪ್ರತಿಫಲ ಸಿಗದೆ ಹೋಗುವ ಸಂಭವವುಂಟು. ಉತ್ಪನ್ನದ ಆಧಾರದ ಮೇಲೆ ಅವನಿಗೆ ಹಣದ ಪೂರೈಕೆಯಾಗುವ ಏರ್ಪಾಡಾದರೆ ಅನುಕೂಲ ಪರಿಸ್ಥಿತಿಯಲ್ಲಿ ಯೋಗ್ಯ ಬೆಲೆಗೆ ಉತ್ಪನ್ನವನ್ನು ಮಾರುವುದು ರೈತರಿಗೆ ಶಕ್ಯವಾಗುತ್ತದೆ. ಅವನಿಗೆ ಕಾಲಕಾಲಕ್ಕೆ ಬೇಕಾಗುವ ಹಣವನ್ನು ಸುಲಭವಾದ ಬಡ್ಡಿದರದಲ್ಲಿ ದೊರಕಿಸುವ ಏರ್ಪಾಡಾದರೆ, ಉತ್ಪನ್ನದ ಮಾರಾಟ ಸುವ್ಯವಸ್ಥಿತವಾಗುವುದು ಸಾಧ್ಯ. ಹಣದ ಧಾವಂತದಿಂದ, ಹೋದಷ್ಟು ಬೆಲೆಗೆ ಉತ್ಪನ್ನವನ್ನು ಮಾರುವ ಪ್ರವೃತ್ತಿ ತಪ್ಪುತ್ತದೆ.

	5. ನಷ್ಟ ಸಂಭವದ ಧಾರಣ : ವಸ್ತುಗಳ ಉತ್ಪಾದನೆಯಾದ ಮೇಲೆ ಅವುಗಳ ಮಾರಾಟವಾಗುವವರೆಗಿನ ಅವಧಿಯಲ್ಲಿ ಅಥವಾ ಉತ್ಪಾದಕರಿಂದ ವಸ್ತುಗಳು ಗ್ರಾಹಕರನ್ನು ಮುಟ್ಟುವವರೆಗಿನ ಅವಧಿಯಲ್ಲಿ ಒಂದಿಲ್ಲೊಂದು ಕಾರಣದಿಂದ ಮಾಲಿಗೆ ಒದಗುವ ಹಾನಿಯನ್ನು ಭರಿಸಬೇಕಾದ ಸಂದರ್ಭ ಬರುತ್ತದೆ. ಈ ಹಾನಿಯನ್ನು ಸಹಿಸುವ ಹೊಣೆಗಾರಿಕೆಯನ್ನು ಮಾರಾಟ ವ್ಯವಹಾರಗಳಲ್ಲಿ ತೊಡಗಿದವರು ನಿರ್ವಹಿಸಬೇಕಾಗುತ್ತದೆ. ಬೆಂಕಿ, ಪ್ರವಾಹ, ಕಳವು, ಬೆಲೆಗಳ ಪಲ್ಲಟ ಮುಂತಾದವುಗಳ ವಿರುದ್ಧ ವಿಮೆ ಇಳಿಸಿ, ಮುಂಜಾಗ್ರತೆ ವಹಿಸುವುದೂ ಮಾರಾಟ ವ್ಯವಹಾರದ ಮುಖ್ಯ ಕಾರ್ಯವಾಗಿದೆ.

	6. ಸಂಸ್ಕರಣ : ಕೆಲವೊಂದು ಉತ್ಪನ್ನಗಳು ಗ್ರಾಹಕರನ್ನು ತಲುಪುವುದಕ್ಕಿಂತ ಮುಂಚೆ ಅವನ್ನು ರೂಪಾಂತರಿಸುವುದು ಅಥವಾ ಸಂಸ್ಕರಿಸುವದು ಅವಶ್ಯವಿರುತ್ತದೆ. ಸೇಂಗಾ ಬೀಜವನ್ನು ಗಾಣಕ್ಕೆ ಕೊಟ್ಟು ಎಣ್ಣೆ ಮಾಡುವುದು, ಗೋದಿಯಿಂದ ಹಿಟ್ಟನ್ನು ಮಾಡುವುದು, ಬತ್ತದಿಂದ ಅಕ್ಕಿಯನ್ನು ತಯಾರಿಸುವುದು-ಇವು ಕೆಲವು ಉದಾಹರಣೆಗಳು. ಕೆಲವೊಂದು ಸಂದರ್ಭಗಳಲ್ಲಿ ಸಂಸ್ಕರಣವನ್ನು ಸ್ವತಃ ಉತ್ಪಾದಕರೇ ಮಾಡುವರಾದರೂ (ಉದಾ : ತುಪ್ಪವನ್ನು ತಯಾರಿಸುವುದು) ಬಹಳಷ್ಟು ಸಂದರ್ಭಗಳಲ್ಲಿ ಸಂಸ್ಕರಣವನ್ನು ಕಡಿಮೆ ವೆಚ್ಚದಲ್ಲಿ ಮಾಡಲು ದೊಡ್ಡ ಗಾತ್ರದಲ್ಲಿ ಮಧ್ಯವರ್ತಿಗಳು ಮತ್ತು ಸಹಕಾರ ಸಂಘಗಳು ಮುಖ್ಯಪಾತ್ರ ವಹಿಸುತ್ತವೆ.

	7. ಶಿಷ್ಟೀಕರಣ ಮತ್ತು ಶ್ರೇಣೀಕರಣ : ಸುವ್ಯವಸ್ಥಿತ ಮಾರಾಟಕ್ಕಾಗಿ ವಸ್ತುಗಳ ಗುಣಮಟ್ಟಗಳನ್ನು ನಿಶ್ಚಯಿಸಿ ಅವಕ್ಕನುಗುಣವಾಗಿ ಶ್ರೇಣೀಕರಿಸಿ ಮಾರಬೇಕಾಗುತ್ತದೆ. ಇದರಿಂದ ಮಾರಾಟ ವ್ಯವಹಾರಗಳು ಸುಲಭವಾಗುತ್ತವೆ. ಶ್ರೇಣೀಕೃತ ವಸ್ತುಗಳ ವಿಷಯದಲ್ಲಿ ಕೊಳ್ಳುವವರಿಗೆ ಆಯಾ ವಸ್ತುಗಳ ಯೋಗ್ಯತೆಯ ಬಗ್ಗೆ ನಿಶ್ಚಿತ ತಿಳಿವಳಿಕೆ ಇರುವುದರಿಂದ ಮಾರಾಟ ವ್ಯವಹಾರಗಳು ಸುಸೂತ್ರವಾಗಿ ಮತ್ತು ಶೀಘ್ರವಾಗಿ ಸಾಗುವುದು ಶಕ್ಯವಾಗುತ್ತದೆ. ಶ್ರೇಣೀಕರಣದಿಂದ ಮಾರುವವನಿಗೆ ಉತ್ತಮ ಬೆಲೆಯೂ, ಕೊಳ್ಳುವವನಿಗೆ ಕೊಟ್ಟ ಹಣಕ್ಕೆ ಉತ್ತಮ ಮಾಲೂ ದೊರೆತು ಇಬ್ಬರಿಗೂ ತೃಪ್ತಿಯಾಗುತ್ತದೆ.

	ಮಾರಾಟ ವೆಚ್ಚ : ಕೃಷಿ ವಸ್ತುವಿನ ಉತ್ಪಾದನೆಯ ಅನಂತರ ಅದನ್ನು ಗ್ರಾಹಕರಿಗೆ ತಲುಪಿಸುವವರೆಗೆ ಮಾಡಬೇಕಾದ ನಾನಾ ಕಾರ್ಯಗಳಿಗೆ ತಗಲುವ ವೆಚ್ಚವನ್ನೇ ಮಾರಾಟ ವೆಚ್ಚವೆಂದು ಕರೆಯುತ್ತಾರೆ. ಕೈಗಾರಿಕೆಯ ಸರಕುಗಳ ಮಾರಾಟ ವೆಚ್ಚಕ್ಕಿಂತ ಈ ವೆಚ್ಚ ಅತ್ಯಂತ ಹೆಚ್ಚಿನದಾಗಿರುತ್ತದೆ. ಏಕೆಂದರೆ ಕೈಗಾರಿಕೆಯ ಸರಕುಗಳನ್ನು ಮಾರಾಟ ಮಾಡುವುದರಲ್ಲಿ ಮೇಲ್ಕಾಣಿಸಿದ ಎಲ್ಲ ಮಾರಾಟಕಾರ್ಯಗಳ ಅವಶ್ಯಕತೆ ಇರುವುದಿಲ್ಲ. 1. ಕೃಷಿ ಪದಾರ್ಥದ ಸ್ವರೂಪ, 2. ಸರಬರಾಯಿಯ ಸ್ವರೂಪ ಮತ್ತು 3. ಬೇಡಿಕೆಯ ಸ್ವರೂಪ- ಈ ಕಾರಣಗಳಿಂದಾಗಿ ಕೃಷಿ ಉತ್ಪನ್ನದ ಮಾರಾಟ ವೆಚ್ಚ ಹೆಚ್ಚಾಗಿರುತ್ತದೆ. ಮೌಲ್ಯದ ದೃಷ್ಟಿಯಲ್ಲಿ ಕೃಷಿ ಉತ್ಪನ್ನದ ಗಾತ್ರ ಮತ್ತು ತೂಕ ಸಾಮಾನ್ಯವಾಗಿ ಹೆಚ್ಚಾಗಿರುವುದರಿಂದ ಅದರ ಸಾಗಣೆ ಮತ್ತು ದಾಸ್ತಾನುಗಳ ವೆಚ್ಚ ಅಧಿಕವಾಗಿರುತ್ತದೆ. ಆದ್ದರಿಂದ ವಸ್ತುವಿನ ಮೌಲ್ಯದ ಮಾನದಿಂದ, ಮಾರಾಟ ವೆಚ್ಚ ಹೆಚ್ಚಾಗುತ್ತದೆ. ಕೃಷಿ ಉತ್ಪನ್ನ ಸಾಮಾನ್ಯವಾಗಿ ಹೆಚ್ಚು ಕಾಲ ಕೆಡದೆ ಇರುವಂಥದಲ್ಲ. ರೈತರು ಬೆಳೆ ಕೊಯ್ಲಾದ ಕೂಡಲೇ ತಮ್ಮ ಉತ್ಪನ್ನಗಳನ್ನು ಪೇಟೆಗೆ ತರುವುದರಿಂದ ಪೂರೈಕೆಯ ಪರಿಮಾಣ ಅಧಿಕವಾಗಿ ಮಾರಾಟವಾಗುತ್ತದೆ. ಅದರ ಸರಬರಾಯಿ ಋತುವಿಗೆ ಅನುಗುಣವಾದ್ದು. ಆದರೆ ಅದರ ಬೇಡಿಕೆ ಸಾಮಾನ್ಯವಾಗಿ ವರ್ಷವಿಡೀ ಇರುತ್ತದೆ. ಆದ್ದರಿಂದ ವರ್ಷವೆಲ್ಲ ಒದಗುವಂತೆ ಇದನ್ನು ದಾಸ್ತಾನು ಮಾಡಿಡಲು ಹೆಚ್ಚು ವೆಚ್ಚ ತಗಲುತ್ತದೆ. ನಾಶೀಗುಣವುಳ್ಳ ಪದಾರ್ಥವಾದರೆ ಅದನ್ನು ರಕ್ಷಿಸಲು ಹೆಚ್ಚು ವೆಚ್ಚ ಭರಿಸುವುದು ಅಗತ್ಯ. (ಉದಾ : ಶೀತಕ ವ್ಯವಸ್ಥೆ) ಈ ಕಾರಣಗಳಿಂದ ಕೃಷಿ ಉತ್ಪನ್ನದ ಮಾರಾಟ ವೆಚ್ಚ ಕೈಗಾರಿಕಾ ವಸ್ತುಗಳ ಮಾರಾಟ ವೆಚ್ಚಕ್ಕಿಂತ ಅತ್ಯಂತ ಅಧಿಕವಾಗಿರುತ್ತದೆ.

	ಕೃಷಿ ಉತ್ಪನ್ನ ಮಾರಾಟ ವೆಚ್ಚ ಭಾರತದಲ್ಲಿ ಅತ್ಯಂತ ಹೆಚ್ಚು. ಅದಕ್ಕೆ ಮುಖ್ಯವಾದ ಕಾರಣವೆಂದರೆ ಭಾರತದ ಮಾರಾಟ ಪದ್ಧತಿಯಲ್ಲಿರುವ ದೋಷಗಳು, ರೈತರ ಜಮೀನು ಹಿಡುವಳಿಗಳು ಬಲು ಚಿಕ್ಕವಾಗಿರುವುದರಿಂದ ಅವರು ಉತ್ಪಾದಿಸಿದ ಅಲ್ಪಪರಿಮಾಣದ ಹುಟ್ಟುವಳಿಯನ್ನು ದೂರದ ಪೇಟೆಗೆ ಸಾಗಿಸಲಾರದೆ ಬಹು ಪಾಲು ರೈತರು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ.

	ಅಲ್ಲದೆ ಇವರಲ್ಲನೇಕರಲ್ಲಿ ಬೇಸಾಯದ ವೆಚ್ಚ ಭರಿಸುವಷ್ಟು ಹಣ ಸಾಮಥ್ರ್ಯ ಇಲ್ಲದಿರುವುದರಿಂದ, ಅದಕ್ಕಾಗಿಯೂ ಜೀವನ ನಿರ್ವಹಣಕ್ಕಾಗಿಯೂ ಮಾಡಿದ ಸಾಲವನ್ನು ತೀರಿಸಲು ಅವರು ತಮ್ಮ ಉತ್ಪನ್ನವನ್ನು ಸುಗ್ಗಿಯಾದೊಡನೆಯೇ ಮಾರಲು ಹಾತೊರೆಯುತ್ತಾರೆ. ದಾಸ್ತಾನು ಸೌಕರ್ಯ ಇಲ್ಲದ್ದು ಇನ್ನೊಂದು ಕೊರತೆ. ಸಾರಿಗೆ ಸೌಕರ್ಯಗಳ ಅಭಾವ, ಸಾಗಾಟಕ್ಕೆ ಬೇಕಾಗುವ ಹಣದ ಅಡಚಣೆ-ಮುಂತಾದವೂ ಸಮಸ್ಯೆಗಳೇ. ಉತ್ಪನ್ನದ ಬಹುದೊಡ್ಡ ಭಾಗವನ್ನು ಅವರು ಹಳ್ಳಿಗಳಲ್ಲೇ ಮಧ್ಯವರ್ತಿಗಳಿಗೆ ಮಾರಬೇಕಾಗಿ ಬರುವುದರಿಂದ ಅವರಿಗೆ ಯೋಗ್ಯ ಬೆಲೆ ದೊರೆಯುವುದಿಲ್ಲ. ಅಂತಿಮವಾಗಿ ಗ್ರಾಹಕರು ಇದನ್ನು ಕೊಳ್ಳುವಾಗ ಕೊಡುವ ಬೆಲೆಯ ಅರ್ಧಕ್ಕಿಂತ ಹೆಚ್ಚು ಭಾಗ ಮಧ್ಯವರ್ತಿಗಳ ಪಾಲಾಗುವುದುಂಟು.

	ಭಾರತದಲ್ಲಿ ಮಧ್ಯವರ್ತಿಗಳ ಹಿತಸಂಬಂಧಗಳಿಗೆ ಅನುಕೂಲವಾಗಿರುವ ಅನೇಕ ಸಂಪ್ರದಾಯಗಳು ಕಂಡುಬರುತ್ತವೆ. ಹೀಗಾಗಿ ರೈತರು ಅನಿಯಂತ್ರಿತ ಮಾರುಕಟ್ಟೆಗಳಲ್ಲಿ ನಾನಾ ರೀತಿಯಲ್ಲಿ ಶೋಷಣೆಗಳಿಗೆ ಒಳಗಾಗುತ್ತಾರೆ. ಇವುಗಳಲ್ಲಿ ಮುಖ್ಯವಾದವೆಂದರೆ : 1. ತೂಕ ಅಳತೆಗಳ ಯೊಗ್ಯ ನಿಯಂತ್ರಣವಿಲ್ಲದ್ದರಿಂದ ಆಗುವ ವಂಚನೆ. 2. ಉತ್ಪನ್ನದ ಮಾದರಿಯನ್ನು ಪರೀಕ್ಷಿಸುವ ನೆವದಲ್ಲಿ ಅಧಿಕ ಪರಿಮಾಣದಲ್ಲಿ ಅದರ ದೋಚಿಕೆ. 3. ಗುಪ್ತ ಸಂಜ್ಞೆಗಳಿಂದ ಬೆಲೆಗಳನ್ನು ನಿರ್ಧರಿಸಿ ನಡೆಸುವ ವಂಚನೆ, 4. ರೈತರ ಮೇಲೆ ಅನವಶ್ಯ, ಅಸಮರ್ಥನೀಯ ಹಾಗೂ ಅನ್ಯಾಯದ ಮಾರುಕಟ್ಟೆಯ ಖರ್ಚುಗಳ ಹೇರಿಕೆ.

	ಈ ನಾನಾ ರೀತಿಯ ಅಕ್ರಮಗಳನ್ನೂ ದೋಷಗಳನ್ನೂ ಸರಿಪಡಿಸಲು ನಾನಾ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ರಾಯಲ್ ಕಮಿಷನ್ ಆಫ್ ಅಗ್ರಿಕಲ್ಚರ್, ಸೆಂಟ್ರಲ್ ಕಾಟನ್ ಕಮಿಟಿ ಮತ್ತು ಮಾರ್ಕೆಟಿಂಗ್ ಉಪಸಮಿತಿಯವರು ಕೆಲವು ಮುಖ್ಯ ಸುಧಾರಣೆಗಳನ್ನು ಸೂಚಿಸಿದ್ದಾರೆ. ಮಾರಾಟದ ಸುಧಾರಣೆಗಳಿಗಾಗಿ ಮತ್ತು ಪ್ರಗತಿಗಾಗಿ ಮಾಡಿದ ಸೂಚನೆಗಳು ಇವು : 1. ನಿಯಂತ್ರಿತ ಮಾರುಕಟ್ಟೆಗಳ ಸ್ಥಾಪನೆ, 2. ಸಹಕಾರಿ ಮಾರಾಟ, 3. ಸಾರಿಗೆ ಸಂಪರ್ಕಸುಧಾರಣೆ, 4. ಸುಲಭ ಬಡ್ಡಿಯಲ್ಲಿ ರೈತರಿಗೆ ಹಣದ ಪೂರೈಕೆ. 5. ಪೇಟೆಗಳಿಗೆ ಸಂಬಂಧಿಸಿದ ಅಂಕಿಅಂಶಗಳ ಸಂಗ್ರಹಣ. 6. ನಿರ್ದಿಷ್ಟ ತೂಕ ಮತ್ತು ಅಳತೆಗಳ ಕಾಯಿದೆಗಳ ಕಟ್ಟುನಿಟ್ಟಾದ ಜಾರಿ ಮತ್ತು 7. ಉತ್ಪನ್ನದ ದಾಸ್ತಾನು ಸೌಲಭ್ಯ, ಭಾರತದಲ್ಲಿ ಉತ್ಪನ್ನ ಮಾರಾಟ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಮುಖ್ಯವಾದವನ್ನು ಕೆಳಗೆ ವಿವರಿಸಿದೆ :

	ಸಹಕಾರಿ ಮಾರಾಟ : ಭಾರತದಲ್ಲಿ ಹಿಡುವಳಿಗಳು ಚಿಕ್ಕವು. ಅವುಗಳ ಉತ್ಪಾದನೆಯೂ ಅಲ್ಪವೇ ಆಗಿದೆ. ರೈತರು ತಮಗೆ ಬೇಕಾದ ಸಾಧನ ಸಲಕರಣೆಗಳನ್ನು ಕೊಳ್ಳುವಾಗ ಹೆಚ್ಚು ಹಣ ತೆರಬೇಕಾಗುತ್ತದೆ. ಇದರಿಂದ ಅವರ ಉತ್ಪಾದನೆ ವೆಚ್ಚ ಕೂಡ ಹೆಚ್ಚಾಗಿ, ಉತ್ಪನ್ನಗಳಿಗೆ ಯೋಗ್ಯ ಮಾರಾಟದ ಸೌಕರ್ಯವಿಲ್ಲದೆ ಹುಟ್ಟುವಳಿಗೆ ಲಾಭದಾಯಕವಲ್ಲದ ಪ್ರತಿಫಲವನ್ನು ಪಡೆಯಬೇಕಾಗುತ್ತದೆ. ರೈತರು ಈ ವಿಷಮ ಸ್ಥಿತಿಯಿಂದ ಪಾರಾಗಲು ಅವರಿಗೆ ಯೋಗ್ಯ ಸಾಧನ ಸಲಕರಣೆಗಳ ಪೂರೈಕೆ ಮತ್ತು ಅವರ ಹುಟ್ಟುವಳಿಗೆ ಯೋಗ್ಯ ಬೆಲೆ ದೊರಕಬೇಕು. ಇದನ್ನು ಅವರಲ್ಲಿ ಒಬ್ಬೊಬ್ಬರೂ ಪ್ರತ್ಯೇಕವಾಗಿ ಸಾಧಿಸಲಾಗುವುದಿಲ್ಲ. ಆದಕಾರಣ ರೈತರು ತಮ್ಮೆಲ್ಲರ ಅಸಮರ್ಥತೆ ಮತ್ತು ಕೊರತೆಗಳನ್ನು ನೀಗಿಕೊಳ್ಳಲು ಮತ್ತು ಪರಸ್ಪರ ಹಿತ ಸಂವರ್ಧನೆಗಾಗಿ ಸಹಕಾರ ತತ್ತ್ವಾನುಗುಣವಾಗಿ ಸಂಘಟಿತರಾಗಿ, ಸುವ್ಯವಸ್ಥಿತವಾದ ಮಾರಾಟ ಸಂಘಗಳನ್ನು ಸ್ಥಾಪಿಸಿ, ಆ ಮೂಲಕ ತಮ್ಮ ಉತ್ಪನ್ನವನ್ನು ಸಾಮೂಹಿಕವಾಗಿ ಮಾರುವುದೂ ಬೇಕಾದ ಸಾಧನ ಸಲಕರಣೆಗಳನ್ನು ಸಾಮೂಹಿಕವಾಗಿ ಕೊಳ್ಳುವುದೂ ಅವಶ್ಯವಾಗಿದೆ. ರೈತನ ಆರ್ಥಿಕ ಸ್ಥಿತಿ ಬಹಳ ಮಟ್ಟಿಗೆ ಆತ ಉತ್ಪಾದಿಸುವ ಪದಾರ್ಥಕ್ಕೆ ಪೇಟೆಯಲ್ಲಿ ದೊರೆಯುವು ಬೆಲೆಯನ್ನೇ ಅವಲಂಬಿಸಿರುತ್ತದೆ. ಉತ್ಪನ್ನದ ಪರಿಮಾಣ, ಫಸಲಿನ ಗುಣ, ಅದಕ್ಕೆ ಪೇಟೆಯಲ್ಲಿ ದೊರೆಯುವ ಬೆಲೆ-ಇವು ರೈತನ ವರಮಾನವನ್ನು ನಿಷ್ಕರ್ಷಿಸುವ ಅಂಶಗಳು. ಸಹಕಾರಿ ಮಾರಾಟದಿಂದ ಉತ್ಪನ್ನಕ್ಕೆ ಯೋಗ್ಯ ಬೆಲೆ ದೊರಕುವುದಲ್ಲದೆ ಮಾರಾಟ ವೆಚ್ಚದಲ್ಲಿ ಗಣನೀಯ ಪರಿಮಾಣದ ಮಿತವ್ಯಯವನ್ನು ಸಾಧಿಸಬಹುದಾಗಿದೆ. ಇದು ರೈತರ ಆರ್ಥಿಕ ಹಿತವನ್ನು ಸಂರಕ್ಷಿಸಲು ಸೂಕ್ತ ಸಾಧನವಾಗಿದೆ.

	ಸಹಕಾರಿ ಮಾರಾಟದಿಂದ ಆಗುವ ಪ್ರಯೋಜನಗಳು, ಸೌಕರ್ಯಗಳು ಮತ್ತು ಲಾಭಗಳು ಅಪಾರವಾಗಿವೆ. ಉತ್ಪನ್ನಕ್ಕೆ ಯೋಗ್ಯ ಬೆಲೆ ದೊರಕಿಸುವುದು ಸಹಕಾರಿ ಮಾರಾಟದ ಮೊದಲನೆಯ ಗುರಿ. ರೈತರು ಸಂಘಟಿತರಾಗಿ, ಸಾಮೂಹಿಕವಾಗಿ ತಮ್ಮ ಉತ್ಪನ್ನವನ್ನು ಸಹಕಾರಿ ಮಾರಾಟ ಸಂಘದ ಮೂಲಕ ವಿಕ್ರಯಿಸುವುದರಿಂದ ಬೆಲೆಯ ವಿಷಯವಾಗಿ ಖರೀದಿದಾರರಿಂದ ಸಾಮೂಹಿಕ ಕರಾರು ಮಾಡುವುದರೊಂದಿಗೆ ಶಕ್ಯವಾಗಿ, ಖರೀದಿದಾರರಲ್ಲಿ ಸ್ಪರ್ಧೆಯುಂಟಾಗಿ ಉತ್ಪನ್ನಕ್ಕೆ ಅಧಿಕ ಯೋಗ್ಯ ಬೆಲೆ ದೊರಕುತ್ತದೆ.

	ಸಹಕಾರಿ ಮಾರಾಟ ಸಂಘಗಳು ಅತ್ಯುತ್ತಮ ಮಾರಾಟ ಪದ್ಧತಿಗಳಾದ ಬಹಿರಂಗ ಹರಾಜು ಮುಂತಾದವುಗಳ ಮೂಲಕ ಉತ್ಪನ್ನವನ್ನು ವಿಕ್ರಯ ಮಾಡಿ ಅದಕ್ಕೆ ಯೋಗ್ಯ ಬೆಲೆ ದೊರಕುವಂತೆ ಮಾಡುತ್ತವೆ. ಸಹಕಾರಿ ಮಾರಾಟ ಸಂಘಗಳು ದೊಡ್ಡ ಪರಿಮಾಣದಲ್ಲಿ ಉತ್ಪನ್ನದ ವ್ಯವಹಾರ ನಡೆಸುವುದರಿಂದ ಅವು ತಜ್ಞರನ್ನು ನಿಯಮಿಸಿ ಉತ್ಪನ್ನವನ್ನು ಶಿಷ್ಟೀಕರಣ, ಶ್ರೇಣೀಕರಣ ಮಾಡಿ ಮಾರುವುದು ಶಕ್ಯವಾಗುತ್ತದೆ. ಇದರಿಂದಾಗಿ ಕೊಳ್ಳುವವರಲ್ಲಿ ಮತ್ತು ವಿಕ್ರಯಿಸುವವರಲ್ಲಿ ಉತ್ಪನ್ನದ ಗುಣ ಮತ್ತು ಅದರ ಶ್ರೇಷ್ಠತೆಯ ಬಗ್ಗೆ ನಿಶ್ಚಿತ ತಿಳಿವಳಿಕೆ ಮೂಡಿ ಉತ್ಪನ್ನದ ಗುಣಕ್ಕೆ ತಕ್ಕಂತೆ ಯೋಗ್ಯ ಬೆಲೆ ದೊರಯುತ್ತದೆ. ಸಹಕಾರ ಸಂಘಗಳು ಉತ್ಪನ್ನವನ್ನು ಹಳ್ಳಿಗಳಲ್ಲಿ ಶೇಖರಿಸಿ ಅವನ್ನು ಒಟ್ಟಾಗಿ ಪೇಟೆಗಳಿಗೆ ಸಾಗಿಸಿ ಮಾರಾಟ ಮಾಡುವುದರಿಂದ ಉತ್ಪನ್ನಕ್ಕೆ ಯೋಗ್ಯಬೆಲೆ ದೊರೆಯುವುದಲ್ಲದೆ ಸಾಗಾಟ ವೆಚ್ಚವೂ ಮಿತವಾಗಿರುತ್ತದೆ. ಮಧ್ಯವರ್ತಿಗಳನ್ನು ಬಹುತೇಕ ನಿವಾರಿಸಲಾಗುವುದರಿಂದ ಮಾರಾಟ ವೆಚ್ಚವೂ ಗಣನೀಯವಾದ ಪರಿಮಾಣದಲ್ಲಿ ಕಡಿಮೆಯಗುತ್ತದೆ. ಸಂಘವೇ ಮಧ್ಯವರ್ತಿಗಳ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಹಕಾರ ಮಾರಾಟ ಸಂಘಗಳು ಇನ್ನೂ ಹಲವಾರು ಸಹಾಯ ಸೌಕರ್ಯಗಳನ್ನು ರೈತರಿಗೆ ಒದಗಿಸುವುವು. ಅವು ಯಾವುವೆಂದರೆ : ಪೇಟೆಯ ಸ್ಥಿತಿಗತಿಗಳ ಬಗ್ಗೆ ತಿಳಿವಳಿಕೆ ನೀಡಿಕೆ, ಉತ್ಪನ್ನಕ್ಕೆ ಯೋಗ್ಯ ಬೆಲೆ ಬರುವ ವರೆಗೆ ಅದರ ದಾಸ್ತಾನು, ರೈತರ ಅಗತ್ಯಗಳಿಗಾಗಿ ಉತ್ಪನ್ನದ ಆಧಾರದ ಮೇಲೆ ಸುಲಭ ಬಡ್ಡಿದರದಲ್ಲಿ ಹಣ ಸಹಾಯ ಮತ್ತು ರೈತರ ಕೃಷಿಗೆ ಯೋಗ್ಯ ಬೆಲೆಗಳಲ್ಲಿ ಅವರಿಗೆ ಬೇಕಾದ ಸಾಧನ ಸಲಕರಣೆಗಳ ಪೂರೈಕೆ. 
ಕೃಷಿ ಉತ್ಪನ್ನದ ಮಾರಾಟ ನಿಯಂತ್ರಣ : ಕೃಷಿ ಉತ್ಪನ್ನದ ಮಾರಾಟದ ವ್ಯವಸ್ಥೆಯ ಪುನರ್ಘಟನೆ ಸುಧಾರಣೆಗಳಿಗೆ ಈಗೀಗ ಹೆಚ್ಚು ಮಹತ್ತ್ವ ಪ್ರಾಪ್ತವಾಗುತ್ತಿದೆ. ಮಾರಾಟ ಪದ್ಧತಿಯನ್ನು ಸಮಗ್ರವಾಗಿ ಹಾಗೂ ಯೋಜನಾ ಬದ್ಧವಾಗಿ ಸುಧಾರಿಸುವ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರಾಟ ನಿಯಂತ್ರಣ ಪ್ರಮುಖ ಹೆಜ್ಜೆಯಾಗಿ ಪರಿಣಮಿಸಿದೆ. ಮಾರುಕಟ್ಟೆಯ ವ್ಯವಹಾರಗಳು ಕ್ರಮಬದ್ಧವಾಗಿ, ನ್ಯಾಯಪೂರ್ವಕವಾಗಿ ನಡೆಯುವಂತೆ ಏರ್ಪಾಡು ಮಾಡುವುದು, ಪೇಟೆಗೆ ಉತ್ಪನ್ನವನ್ನು ವಿಕ್ರಯಿಸಲಿಕ್ಕೆ ತಂದ ರೈತರ ಮತ್ತು ಕೊಳ್ಳಲು ಬಂದ ವರ್ತಕರ ನಡುವಣ ವ್ಯವಹಾರಗಳನ್ನು ಕ್ರಮಗೊಳಿಸುವುದು, ರೈತರ ನ್ಯಾಯವಾದ ಹಿತಗಳಿಗೆ ಬಾಧಕವಾಗುವಂಥ ಪದ್ಧತಿಗಳನ್ನು ಪ್ರತಿಬಂಧಿಸುವುದು, ಅನಾವಶ್ಯಕ ಹಾಗೂ ಅನ್ಯಾಯದ ವೆಚ್ಚವನ್ನು ಹೋಗಲಾಡಿಸಿ, ಮಾರಾಟ ವೆಚ್ಚದಲ್ಲಿ ಉಳಿತಾಯ ಸಾಧಿಸುವುದು, ಅಲ್ಲದೆ ಗುಪ್ತ ವಿಕ್ರಯ ಪದ್ಧತಿಯನ್ನು ನಿಲ್ಲಿಸಿ ಜಾಹೀರು ಅಥವಾ ಬಹಿರಂಗ ವಿಕ್ರಯ ಪದ್ಧತಿ ಜಾರಿಗೆ ತರುವುದು-ಇವು ಇದರ ಮುಖ್ಯ ಉದ್ದೇಶಗಳು.

	ಕೃಷಿ ಉತ್ಪನ್ನ ಮಾರಾಟ ನಿಯಂತ್ರಣ ಕಾಯಿದೆ 1939ರಲ್ಲಿ ಮುಂಬೈ ಪ್ರಾಂತ್ಯದಲ್ಲಿ ಜಾರಿಗೆ ಬಂದಮೇಲೆ ಅದೇ ಬಗೆಯ ಕಾಯಿದೆಗಳು ಇತರ ಪ್ರಾಂತ್ಯಗಳಲ್ಲಿಯೂ ಬಂದುವು. ಹಿಂದಿನ ಮೈಸೂರು ಸಂಸ್ಥಾನದಲ್ಲಿ 1939ರ ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾಯಿದೆಯ ಪ್ರಕಾರ ನಿಯಂತ್ರಿತ ಮಾರುಕಟ್ಟೆಗಳು ಸರ್ಕಾರದ ಸ್ವಾಮ್ಯದಲ್ಲಿ ಸ್ಥಾಪಿತವಾದುವು. 1966-67ರಲ್ಲಿ ರಾಜ್ಯದಲ್ಲಿ ಒಟ್ಟು 155 ನಿಯಂತ್ರಿತ ಮಾರುಕಟ್ಟೆಗಳಿದ್ದು ಒಟ್ಟು 245.50 ಕೋಟಿ ರೂಪಾಯಿಗಳ ವ್ಯವಸಾಯೋತ್ಪನ್ನಗಳು ನಿಯಂತ್ರಿತ ಮಾರುಕಟ್ಟೆಗಳ ಮೂಲಕ ಮಾರಾಟವಾದುವು. ಈ ಕಾಯಿದೆಯನ್ವಯ ಕೃಷಿ ಉತ್ಪನ್ನದ ಮಾರಾಟ ಮತ್ತು ಕೊಳ್ಳಿಕೆ ವ್ಯವಹಾರಗಳನ್ನು ಕ್ರಮಪಡಿಸಲಾಗುವುದು. ಈ ವ್ಯವಹಾರಗಳನ್ನು ನೋಡಿಕೊಳ್ಳಲು 9 ರಿಂದ 15 ಜನ ಸದಸ್ಯರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುತ್ತದೆ. ಈ ಸಮಿತಿಯಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ಜನ ರೈತ ಪ್ರತಿನಿಧಿಗಳು ಇರುತ್ತಾರೆ. ಒಬ್ಬರು ಅಥವಾ ಇಬ್ಬರು ಸರ್ಕಾರದಿಂದ ನಾಮಕರಣ ಹೊಂದಿದವರಿರುತ್ತಾರೆ. ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ ಮತ್ತು ವರ್ತಕರ ಚುನಾಯಿತ ಪ್ರತಿನಿಧಿಗಳು ಈ ಸಮಿತಿಯ ಪ್ರಾತಿನಿಧ್ಯವನ್ನು ಪಡೆದಿರುತ್ತಾರೆ. 1966ರ ಮೈಸೂರು ಕೃಷಿ ಉತ್ಪನ್ನ ಮಾರಾಟ ನಿಯಂತ್ರಣ ಕಾಯಿದೆಯ ಪ್ರಕಾರ ಈ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ರೈತರ ಪ್ರತಿನಿಧಿಗಳೇ ಆಗಿರಬೇಕು. ಈ ಕಾಯಿದೆಯಲ್ಲಿ ಪೇಟೆಯ ಕ್ಷೇತ್ರ, ಮಾರುಕಟ್ಟೆಯ ಪ್ರದೇಶ, ಉಪಮಾರುಕಟ್ಟೆಯ ಪ್ರದೇಶಗಳಲ್ಲಿ ನಿಯಂತ್ರಣಕ್ಕೆ ಒಳಪಟ್ಟ ದವಸ_ಧಾನ್ಯಗಳು ಮುಂತಾದವನ್ನು ಕಟ್ಟುನಿಟ್ಟಾಗಿ ನಮೂದಿಸಲಾಗಿರುತ್ತದೆ. ವರ್ತಕರು ಮಾರುಕಟ್ಟೆಯ ಪ್ರದೇಶದಲ್ಲಿ ವ್ಯವಹಾರ ನಡೆಸಲು ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ನಿಗದಿಯಾದ ಹಣ ಕೊಡಬೇಕಾಗುತ್ತದೆ. ಉತ್ಪನ್ನ ಶ್ರೇಣೀಕರಣಕ್ಕೆ ನುರಿತ ಜನರನ್ನು ನಿಯಮಿಸಲಾಗುತ್ತದೆ. ನಿರ್ದಿಷ್ಟ ತೂಕ ಅಳತೆಗಳನ್ನು ಜಾರಿಗೆ ತರುವುದು, ಮಾರಾಟ ಪದ್ಧತಿಗಳನ್ನು ಕ್ರಮಗೊಳಿಸುವುದು, ಗುಪ್ತ ಸಂಜ್ಞೆಗಳಿಂದ ಉತ್ಪನ್ನದ ಬೆಲೆ ನಿರ್ಧರಿಸುವ ಪದ್ಧತಿಯನ್ನು ನಿರ್ಬಂಧಿಸುವುದು ಮತ್ತು ಬಹಿರಂಗ ಕರಾರು ಪದ್ಧತಿ ಅಥವಾ ಜಾಹೀರು ಹರಾಜು ಪದ್ಧತಿಯಿಂದ ಉತ್ಪನ್ನದ ಮಾರಾಟ ಏರ್ಪಡಿಸುವುದು, ಮಾರಾಟ ಖರೀದಿ ವ್ಯವಹಾರಗಳನ್ನು ಕ್ರಮಬದ್ಧವಾಗಿ ನಡೆಸುವುದು ಮತ್ತು ಅವುಗಳ ಲೆಕ್ಕಪತ್ರಗಳನ್ನಿಡುವ ವ್ಯವಸ್ಥೆ ಮಾಡುವುದು ಮುಂತಾದವು ಮಾರಾಟ ನಿಯಂತ್ರಣ ಕಾಯಿದೆಯ ಮುಖ್ಯಾಂಶಗಳು. ಅಲ್ಲದೆ ಮಾರುಕಟ್ಟೆ ಸಮಿತಿಗಳು ಹುಟ್ಟುವಳಿಯ ಬೆಲೆಗಳ ವಿಷಯವಾಗಿ ರೈತರಲ್ಲಿ ತಿಳುವಳಿಕೆಯಾಗುವಂತೆ ಮಾರುಕಟ್ಟೆಯ ವರದಿಗಳನ್ನು ಪ್ರಸಾರ ಮಾಡುತ್ತವೆ. ಉತ್ಪನ್ನಕ್ಕೆ ಯೋಗ್ಯ ಬೆಲೆ, ಶಿಷ್ಟ ಅಳತೆ ತೂಕ, ಅನಾವಶ್ಯಕ ವಟ್ಟಗಳ ಹಾಗೂ ಕಡಿತಗಳ ನಿರ್ಬಂಧ- ಈ ಮೂರು ಮುಖ್ಯ ತತ್ತ್ವಗಳ ಮೇಲೆ ಮಾರಾಟ ನಿಯಂತ್ರಣ ಯೋಜನೆ ರೂಪಿತವಾಗಿದೆ.

	ಶಿಷ್ಟ ತೂಕ ಮತ್ತು ಅಳತೆ : ದೇಶದಲ್ಲಿ 1959ರಲ್ಲಿ ಮೆಟ್ರಿಕ್ ಪದ್ಧತಿ ಅಥವಾ ದಶಮಾಂಶ ಪದ್ಧತಿ ಜಾರಿಗೆ ಬರುವುದಕ್ಕಿಂತ ಮುಂಚೆ ಒಂದೊಂದು ಕಡೆ ಒಂದೊಂದು ರೀತಿಯ ಅಳತೆ ಮತ್ತು ತೂಕಗಳು ಜಾರಿಯಲ್ಲಿದ್ದುವು. ಅವುಗಳಿಂದಾಗಿ ರೈತರು ತಮ್ಮ ಉತ್ಪನ್ನವನ್ನು ವಿಕ್ರಯಿಸುವಾಗ ವರ್ತಕರ ಮೋಸಗಳಿಗೆ ಬಲಿಯಾಗಿ ಅಧಿಕ ಹಾನಿಯಾಗುತ್ತಿತ್ತು. ದೇಶದಲ್ಲಿ ಆಗ ಸುಮಾರು 200 ಕ್ಕಿಂತಲೂ ಹೆಚ್ಚು ವಿವಿಧ ಅಳತೆ ಮತ್ತು ತೂಕಗಳು ಜಾರಿಯಲ್ಲಿದ್ದುವು. ದಶಮಾಂಶ ಪದ್ಧತಿ ಜಾರಿಗೆ ಬಂದ ಅನಂತರ ಇವೆಲ್ಲವನ್ನೂ ನಿವಾರಿಸಿ ದೇಶದಲ್ಲಿ ಏಕರೂಪದ ತೂಕ ಮತ್ತು ಅಳತೆಗಳು ಜಾರಿಗೆ ಬಂದುವು. ತೂಕ ಮತ್ತು ಅಳತೆಗಳನ್ನು ನಿಯಂತ್ರಿಸಲು ಮತ್ತು ಅವುಗಳ ಉಲ್ಲಂಘನೆಯಾಗದಂತೆ ಕಾಯ್ದುಕೊಳ್ಳಲು ತೂಕ-ಅಳತೆಗಳ ಒಂದು ಪ್ರತ್ಯೇಕ ಇಲಾಖೆ ಪ್ರಾರಂಭವಾಯಿತು.

	ಉತ್ಪನ್ನಗಳ ಶ್ರೇಣೀಕರಣ : ಇದರಿಂದ ಮಾರುವವರಿಗೂ ಕೊಳ್ಳುವವರಿಗೂ ಅನುಕೂಲವಾಗಿ, ಒಳ್ಳೆಯ ಮತ್ತು ವಿವಿಧ ಬಗೆಯ ಪದಾರ್ಥಗಳನ್ನು ಉತ್ಪಾದಿಸುವ ರೈತರಿಗೆ ಅಧಿಕ ಬೆಲೆ ದೊರೆತು, ವರ್ತಕರೂ ಗ್ರಾಹಕರು ವಿಶ್ವಾಸದಿಂದ ತಮಗೆ ಬೇಕಾದ ದರ್ಜೆಯ ಉತ್ಪನ್ನವನ್ನು ಕೊಳ್ಳಲು ಸಮರ್ಥರಾಗುತ್ತಾರೆ. ವಿವಿಧ ದರ್ಜೆಯ ವಸ್ತುಗಳ ಬೆಲೆಗಳನ್ನು ನಿರ್ಧರಿಸುವುದು ಸುಲಭವಾಗುತ್ತದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರ 1937ರಲ್ಲಿ ಕೃಷಿ ಉತ್ಪನ್ನ ಹುಟ್ಟುವಳಿಯ ಶ್ರೇಣೀಕರಣ ಮತ್ತು ಮಾರಾಟ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಮೇರೆಗೆ ಹತ್ತಿ, ಸೆಣಬು, ತುಪ್ಪ, ಮೊಟ್ಟೆ- ಮುಂತಾದ ಉತ್ಪನ್ನಗಳನ್ನು ಶ್ರೇಣೀಕರಿಸಿ ಆಗ್‍ಮಾರ್ಕ್ ಎಂಬ ಕೃಷಿ ಗುರುತನ್ನು ಹಾಕಿ ಮಾರಾಟಮಾಡುವ ವ್ಯವಸ್ಥೆ ಮಾಡಲಾಗಿದೆ.

	ದಾಸ್ತಾನು ಸೌಲಭ್ಯ : ಮಾರಾಟಕ್ಕೆ ಬಂದ ಉತ್ಪನ್ನವನ್ನು ಯೋಗ್ಯ ರೀತಿಯಿಂದ ದಾಸ್ತಾನು ಮಾಡುವ ಮತ್ತು ಹಾಗೆ ಆ ದಾಸ್ತಾನಾದ ವಸ್ತುವಿನ ಆಧಾರದ ಮೇಲೆ ಉದ್ದರಿ ಸೌಲಭ್ಯ ದೊರಕಿಸುವ ದೃಷ್ಟಿಯಿಂದ ದಾಸ್ತಾನು ಮಳಿಗೆಗಳಿಗೆ ಹೆಚ್ಚು ಮಹತ್ತ್ವ ಪ್ರಾಪ್ತವಾಗಿದೆ. ಈ ದಿಶೆಯಲ್ಲಿ ಕೇಂದ್ರ ಉಗ್ರಾಣ ಮಂಡಲಿಯ ಉಗ್ರಾಣಗಳ ಕಾಯಿದೆಯ ಪ್ರಕಾರ ಸ್ಥಾಪಿತವಾದ, ದೇಶದ ಎಲ್ಲ ಪ್ರಮುಖ ಮಾರಾಟ ಕೇಂದ್ರಗಳಲ್ಲೂ ಅಧಿಕೃತ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸಲು ಕಾರ್ಯಕ್ರಮವಿದೆ. ಇದರ ಜೊತೆಗೆ ರಾಜ್ಯ ಉಗ್ರಾಣ ಮಂಡಲಿಯೂ ತನ್ನ ಕಾರ್ಯ ನಿರ್ವಹಿಸಿ ರೈತರಿಗೆ ತಮ್ಮ ಫಸಲನ್ನು ದಾಸ್ತಾನು ಮಾಡಲು ಅನುಕೂಲ ಕಲ್ಪಸಿದೆ.

	ಸಾರಿಗೆ ಸಂಪರ್ಕ ಸೌಲಭ್ಯ : ಕೃಷಿ ಉತ್ಪನ್ನ ಮಾರಾಟ ವೆಚ್ಚವನ್ನು ಕಡಿಮೆ ಮಡಲು ಹುಟ್ಟುವಳಿಯನ್ನು ಶೀಘ್ರವಾಗಿ ಕಡಿಮೆ ವೆಚ್ಚದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಸಾರಿಗೆ ಸಂಪರ್ಕ ಸೌಲಭ್ಯ ಅತ್ಯಂತ ಅವಶ್ಯಕ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಂಚವಾರ್ಷಿಕ ಯೋಜನೆಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ಸಾರಿಗೆ ಸೌಲಭ್ಯವನ್ನು ಹೆಚ್ಚಿಸುವುದು ಮತ್ತು ಸಂಪರ್ಕ ಸಾಧನಗಳನ್ನು ವೃದ್ಧಿಪಡಿಸುವುದು-ಇವೇ ಮೊದಲಾದವಕ್ಕೆ ಸಾಕಷ್ಟು ಗಮನ ಕೊಟ್ಟಿವೆ.

	ಬೆಲೆಗಳ ಸ್ಥಾಯೀಕರಣ : ಈಚೆಗೆ ಸರ್ಕಾರ ಕೃಷಿ ಉತ್ಪನ್ನದ ಧಾರಣೆ ಮಟ್ಟವನ್ನು ದೃಢಗೊಳಿಸಲು ಮೂರು ವಿಶೇಷ ಕ್ರಮಗಳನ್ನು ಕೈಗೊಂಡಿದೆ : 1. ಕೃಷಿ ಉತ್ಪನ್ನದ ಸಂಬಂಧವಾಗಿ ಕಾಲಕಾಲಕ್ಕೆ ಸರಕಾರ ತನ್ನ ನೀತಿಯನ್ನು ರೂಪಿಸುವುದು. 2. ಕಾಲಕಾಲಕ್ಕೆ ಉತ್ಪನ್ನದ ಗರಿಷ್ಠ ಮತ್ತು ಕನಿಷ್ಠ ಬೆಲೆಗಳನ್ನು ನಿಗದಿಪಡಿಸುವುದು, 3. ಅವಶ್ಯವೆನಿಸಿದರೆ ಮಾರುಕಟ್ಟೆಯಲ್ಲಿ ಸರ್ಕಾರ ಉತ್ಪನ್ನವನ್ನು ಕೊಂಡು ಮಾರುವ ಕೆಲಸದಲ್ಲಿ ಭಾಗವಹಿಸುವುದು.

	ಸರ್ಕಾರ ಧಾರಣೆಯಲ್ಲಿ ದೃಢತೆ ಸಾಧಿಸಲು ಸಲಹಾ ಸಮಿತಿಗಳನ್ನು ನೇಮಿಸಿದೆ. ಅವುಗಳ ಉದ್ದೇಶ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಪ್ರಚುರಪಡಿಸುವುದಾಗಿದೆ. ಈ ಸಮಿತಿಗಳ ಸಲಹೆಗಳ ಮೇರೆಗೆ ಕೃಷಿ ಉತ್ಪನ್ನಗಳ ಕನಿಷ್ಠ ಮತ್ತು ಗರಿಷ್ಠ ಬೆಲೆಗಳನ್ನು ಗೊತ್ತುಪಡಿಸಿ ಗ್ರಾಹಕರಿಗೂ ಉತ್ಪಾದಕರಿಗೂ ನಷ್ಟವಾಗದಂತೆ ಬೆಲೆ ನೀತಿ ರೂಪಿಸುವುದು ಮತ್ತು ಆವಶ್ಯಕವೆನಿಸಿದರೆ ಕೊಳ್ಳುವ ವ್ಯವಹಾರದಲ್ಲಿ ತಾನೇ ಭಾಗವಹಿಸಿ ಆ ಮೂಲಕ ಬೆಲೆಗಳ ಮಟ್ಟದಲ್ಲಿ ಸ್ಥೈರ್ಯ ಸ್ಥಾಪಿಸುವುದು ಸರ್ಕಾರದ ಉದ್ದೇಶಗಳಲ್ಲೊಂದಾಗಿದೆ. ಈ ದಿಶೆಯಲ್ಲಿ ಭಾರತದ ಆಹಾರ ಕಾರ್ಪೋರೇಷನ್ ಮತ್ತು ಕೃಷಿ ಉತ್ಪನ್ನ ಬೆಲೆಗಳ ಆಯೋಗಗಳನ್ನು ಸ್ಥಾಪಿಸಿರುವುದು ಮಹತ್ತ್ವದ ಕ್ರಮ. ಅದರಿಂದ ಕೆಲವೊಂದು ವೇಳೆ ಮಾರುಕಟ್ಟೆಯಲ್ಲಿ ಸಂಭವಿಸುವ ಬೆಲೆ ಕುಸಿತದಿಂದ ಆಗುವ ನಷ್ಟವನ್ನು ಗಣನೀಯವಾಗಿ ತಡೆಗಟ್ಟುವುದು ಸಾಧ್ಯ. 

	ಭಾರತದಲ್ಲಿ ಕೃಷಿ ಉತ್ಪನ್ನ ಮಾರಾಟದ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 70 ಜನ ರೈತರು. ಅವರ ಮುಖ್ಯ ಉತ್ಪನ್ನ ಕೃಷಿ ಸಂಬಂಧಿಯಾದ್ದು. ಅವರ ಜೀವನ ಮಟ್ಟ ಮತ್ತು ಆರ್ಥಿಕ ಸ್ಥಿತಿಗೆ ಕೃಷಿ ಉತ್ಪನ್ನ ಆದಾಯವೇ ಅಸ್ತಿಭಾರ. ಕೃಷಿ ಉತ್ಪನ್ನಗಳಿಗೆ ತಕ್ಕ ಪ್ರತಿಫಲ ದೊರೆಯದೆ ಅವರ ಸ್ಥಿತಿ ಸುಧಾರಿಸುವುದು ಅಸಾಧ್ಯ. ಇವಲ್ಲದೆ ಅಂತಿಮ ಗ್ರಾಹಕರಿಗೆ ಯೋಗ್ಯ ಬೆಲೆಗೆ ಯೋಗ್ಯ ವಸ್ತುಗಳು ದೊರೆಯದೆ ಇದ್ದರೆ ಅದರಿಂದಾಗುವ ಅನಿಷ್ಟ ಪರಿಣಾಮಗಳು ಅಪಾರ.  ಈ ದೃಷ್ಟಿಯಿಂದ ಕೃಷಿ ಉತ್ಪನ್ನ ಮಾರಾಟವನ್ನು ಸರ್ವವಿಧದಲ್ಲೂ ಸುಧಾರಿಸುವುದು ಅತಿಮುಖ್ಯ.

	ಮಧ್ಯವರ್ತಿಗಳನ್ನು ನಿವಾರಿಸಿ, ಉತ್ಪಾದಕ ಪಡೆಯುವ ಬೆಲೆಗೂ ಗ್ರಾಹಕ ಕೊಡುವ ಬೆಲೆಗೂ ಇರುವ ಅಂತರವನ್ನು ಕಿರಿದುಗೊಳಿಸುವುದೇ ಮಾರಾಟ ವ್ಯವಸ್ಥೆಯ ಸುಧಾರಣೆಯ ಮುಖ್ಯೋದ್ದೇಶ. (ಎಸ್.ಸಿ.ಎಚ್.)